ಬುಧವಾರ, ಅಕ್ಟೋಬರ್ 4, 2017

ಕಂಠೀರವ ನರಸರಾಜ ಒಡೆಯರ್ ಅವರಿಗೆ 'ರಣಧೀರ' ಎಂಬ ಬಿರಿದು ಹೇಗೆ ಬಂತು

ರಣಧೀರ ಕಂಠೀರವ ನರಸರಾಜ ಒಡೆಯರ್ (1638–1659) ಆಡಳಿತಾವಧಿಯಲ್ಲಿ ಮೈಸೂರು ಎಲ್ಲಾ ರಂಗದಲ್ಲಿ ಹೆಸರು ಗಳಿಸಿದ್ದರು. ಕಂಠೀರವ ನರಸರಾಜ ಒಡೆಯರ್ ಅವರಿಗೆ 'ರಣಧೀರ' ಎಂಬ ಬಿರಿದು ಹೇಗೆ ಬಂತು ಎಂಬುದನ್ನು ಇಲ್ಲಿ ನೋಡಿ .
ಅಂದಿನ ಕಾಲದಲ್ಲಿ ತಿರುಚನಾಪಲ್ಲಿಯ ಪೈಲ್ವಾನನೋರ್ವ ತುಂಬಾ ಪ್ರಖ್ಯಾತ ಕುಸ್ತಿಪಟುವಾಗಿದ್ದ. ಈತನ ವಿರುದ್ಧ ಎಂತಹ ಘಟಾನುಘಟಿ ಪೈಲ್ವಾನರು ತರಗುಡುತ್ತಿದ್ದರು. ಆತನನ್ನು ಯಾರೂ ಮೀರಿಸಿರಲಿಲ್ಲ.

ತನ್ನಂತ ಶಕ್ತಿಶಾಲಿ ಕುಸ್ತಿಪಟು ಯಾರೂ ಇಲ್ಲವೆಂದು ಭಾವಿಸಿದ್ದ ತಿರುಚನಪಳ್ಳಿಯ ಪೈಲ್ವಾನ್, ಒಮ್ಮೆ ಮೈಸೂರಿಗೆ ಭೇಟಿ ನೀಡಿದ್ದ. ಈ ಸಮಯದಲ್ಲಿ ಲಂಗೋಟಿಯನ್ನು (ಕುಸ್ತಿ ಆಡಲು ಬಳಸುವ ಬಟ್ಟೆ) ಊರು ಹೊರಾವರಣದಲ್ಲಿರುವ ಮರಕ್ಕೆ ನೇತು ಹಾಕಿ, ಯಾರಾದರೂ ಕುಸ್ತಿಪಟು ನನ್ನ ವಿರುದ್ಧ ಜಯಶಾಲಿಯಾದರೆ ಈ ಲಂಗೋಟಿಯನ್ನು ತೆಗೆಯುತ್ತೇನೆ. ಇಲ್ಲವಾದರೆ ನಾನು ಬದುಕಿರುವವರೆಗೂ ಈ ನೇತುಹಾಕಿರುವ ಲಂಗೋಟಿ ಕೆಳಗೆ ತಲೆ ತಗ್ಗಿಸಿ ನಡೆಯಬೇಕೆಂದು ಜನತೆಯನ್ನು ಅವಮಾನಿಸಿ ತೆರಳಿದ್ದನಂತೆ.

ಇದರಿಂದ ಕೆರಳಿದ್ದ ಮೈಸೂರಿನ ಕುಸ್ತಿಪಟುಗಳು, ತಿರುಚನಾಪಲ್ಲಿಗೆ ತೆರಳಿ, ಪೈಲ್ವಾನ್‍ನೊಡನೆ ಕಾದಾಡಿ ಸೋತು ಸುಣ್ಣವಾಗಿ ಬರುತ್ತಿದ್ದರು. ಸೋಲಿನ ಮಾತುಗಳನ್ನು ಕೇಳಿದ ಮಹಾರಾಜ ಕಂಠೀರವ ನರಸರಾಜ ಒಡೆಯರ್ ಒಮ್ಮೆ ತಾವೇ ಮಾರುವೇಷದಲ್ಲಿ ತಿರುಚನಪಲ್ಲಿಗೆ ತೆರಳಿದ್ದರು.

ತಿರುಚನಾಪಲ್ಲಿಯಲ್ಲಿ ಮಾರುವೇಷ ತೆಗೆದು ಅಖಾಡಕ್ಕಿಳಿದು ಹೋರಾಡಿದ್ದ ಮಹಾರಾಜ, ಆ ಪೈಲ್ವಾನಅನ್ನು ಸೆದೆಬಡಿದು, ಮಣ್ಣು ಮುಕ್ಕಿಸಿದ್ದರು. ನಂತರ ಅಲ್ಲಿಂದ ಪೈಲ್ವಾನ್‌‌ನನ್ನು ಕರೆದುಕೊಂಡು ಬಂದು, ಮರಕ್ಕೆ ನೇತು ಹಾಕಿದ ಲಂಗೋಟಿಯನ್ನು ತೆಗೆಸಿದ್ದರು.

ಇದರಿಂದ ಸಂತಸಗೊಂಡಿದ್ದ ಜನ ಕಂಠೀರವ ನರಸರಾಜ ಒಡೆಯರ್ರಿಗೆ ಜಯ ಘೋಷಣೆ ಕೂಗಿದ್ದರು. ಅಲ್ಲಿಂದ ‘ರಣಧೀರ’ ಕಂಠೀರವ ನರಸರಾಜ ಒಡೆಯರ್ ಎಂಬ ಬಿರುದು ಇವರಿಗೆ ಬಂದಿತ್ತು ಎನ್ನಲಾಗ್ತಿದೆ.
ಈ ಮಹಾರಾಜರು ಸ್ವತಃ ಉತ್ತಮ ಕುಸ್ತಿಪಟು ಕೂಡ ಆಗಿದ್ದರು. ಪ್ರತಿನಿತ್ಯ ಚಾಮುಂಡಿ ಬೆಟ್ಟದಲ್ಲಿರುವ ಸಾವಿರ ಮೆಟ್ಟಲುಗಳನ್ನು ಹತ್ತುವಾಗ, ತಮ್ಮ ಹೆಗಲ ಮೇಲೆ ಬಲಿಷ್ಠ ಕರುವೊಂದನ್ನು ಹೆಗಲಮೇಲೆ ಇಟ್ಟುಕೊಂಡು ನಡೆಯುತ್ತಿದ್ದರು ಎಂಬ ಇತಿಹಾಸವೂ ಕೂಡ ಇದೆ.

ರಾಜ ಮಹಾರಾಜರು ಅರಮನೆಯೊಳಗೆ ಕುಸ್ತಿ ಅಭ್ಯಾಸ ಮಾಡಿ, ದೇಹಸಿರಿಯನ್ನು ಕಾಪಾಡಿಕೊಳ್ಳುತ್ತಿದ್ದರು. ಆದರೆ, ಕಂಠೀರವ ನರಸರಾಜ ಒಡೆಯರ್‌‌ ತಮ್ಮ ಸಂಸ್ಥಾನದ ಸ್ಥಾನಮಾನಕ್ಕಾಗಿ ಸಾರ್ವಜನಿಕವಾಗಿ ಕುಸ್ತಿ ಮಾಡಿದ ಕುಸ್ತಿ ಪಟು. ಇಂದಿಗೂ ಮೈಸೂರು ಕುಸ್ತಿಯ ತವರೂರಾಗಿದೆ.


(Why Kanteerava Narasaraja Wodeyar was titled as 'Ranadheera')

0 ಕಾಮೆಂಟ್‌(ಗಳು):

ಕಾಮೆಂಟ್‌‌ ಪೋಸ್ಟ್‌ ಮಾಡಿ

Like Us On Facebook